ಭಾರತದ ಉತ್ತರ ಪ್ರದೇಶ ರಾಜ್ಯದ ರಾಜಧಾನಿ ಹಾಗೂ ಜಿಲ್ಲಾ ಆಡಳಿತ ಕೇಂದ್ರ. ಇದು ಗೋಮತೀ ನದಿಯ ದಕ್ಷಿಣ ದಂಡೆಯಲ್ಲಿದೆ. ಇದು ಈಶಾನ್ಯದಲ್ಲಿ ಕಾನ್ಪುರ, ದಕ್ಷಿಣದಲ್ಲಿ ಬರೈಕ್, ಪಶ್ಚಿಮದಲ್ಲಿ ಗೋರಖ್‍ಪುರ ಹಾಗೂ ಉತ್ತರದಲ್ಲಿ ಫತೇಪುರ್ ಜಿಲ್ಲೆಗಳಿಂದ ಸುತ್ತುವರಿದಿದೆ. ಇದರ ಜಿಲ್ಲಾ ವಿಸ್ತೀರ್ಣ 2,528 ಚ.ಕಿಮೀ ಹಾಗೂ ನಗರ ವಿಸ್ತೀರ್ಣ 79 ಚ.ಕಿಮೀ. ಜಿಲ್ಲಾ ಜನಸಂಖ್ಯೆ 36,81,416 ಹಾಗೂ ನಗರ ಜನಸಂಖ್ಯೆ 17,31,224. ಇದು ಸಮುದ್ರ ಮಟ್ಟಕ್ಕಿಂತ 123 ಮೀ ಎತ್ತರದಲ್ಲಿದೆ. ಹಿಂದಿ, ಉರ್ದು ಹಾಗೂ ಇಂಗ್ಲಿಷ್ ಇಲ್ಲಿನ ಪ್ರಮುಖ ಭಾಷೆಗಳು. ವಿಮಾನ ಸಾರಿಗೆ, ರೈಲುಸಾರಿಗೆ, ರಸ್ತೆ ಸಾರಿಗೆ ಸೌಲಭ್ಯಗಳಿವೆ. ಲಖನೌ ವಿಶ್ವವಿದ್ಯಾಲಯ ಹಾಗೂ ಅನೇಕ ಶಾಲಾ, ಕಾಲೇಜುಗಳಿವೆ.
 
	ಐತಿಹ್ಯಗಳ ಪ್ರಕಾರ ‘ಶ್ರೀರಾಮಚಂದ್ರ ವನವಾಸ ಮುಗಿಸಿದ ಅನಂತರ ಈ ಪ್ರದೇಶವನ್ನು ತನ್ನ ಸಹೋದರ ಲಕ್ಷ್ಮಣನಿಗೆ ನೀಡಿದನೆಂದೂ ಲಕ್ಷ್ಮಣ, ‘ಲಕ್ಷ್ಮಣ್‍ತೀಲ’ ಎಂಬಲ್ಲಿ ಆಳಿದನೆಂದೂ ಅದು ಗೋಮತೀ ನದಿತೀರದ ಪ್ರದೇಶವೆಂದೂ ಲಕ್ಷ್ಮಣನ ಹೆಸರಿನಿಂದ ‘ಲಖನೌ’ ಎಂದು ಹೆಸರಾಯಿತೆಂದೂ ಹೇಳಲಾಗಿದೆ. ಲಖನ್ ಐಹಿರ್ ಎಂಬ ಮುಖಂಡನೊಬ್ಬ ಆ ಪ್ರದೇಶದಲ್ಲಿ ಒಂದು ಕೋಟೆ ನಿರ್ಮಿಸಿದನೆಂದೂ ಆ ಕೋಟೆ ‘ಕಿಲ್ಲಾಲಖನ್’ ಎಂದು ಹೆಸರಾಗಿ ಮುಂದೇ ಅದನ್ನೇ ಲಖನೌ ಎಂದು ಕರೆಯಲಾಯಿತೆಂದು ಇನ್ನೊಂದು ಐತಿಹ್ಯ ಹೇಳುತ್ತದೆ. 

	ಪುರಾಣ ಕಾಲದಲ್ಲಿ ಯುಧಿಷ್ಠಿರನ ಮೊಮ್ಮಗನಾದ ಜನಮೇಜಯ ಈ ಪ್ರದೇಶವನ್ನು ಋಷಿಮುನಿಗಳಿಗೆ ದಾನ ನೀಡಿದನೆಂದೂ ಇಲ್ಲಿ ಬ್ರಾಹ್ಮಣರು ಹಾಗೂ ಕ್ಷತ್ರಿಯರು ನೆಲೆಸಿದ್ದರೆಂದು ಹೇಳಲಾಗುತ್ತದೆ. ಕೋಸಲ ರಾಜ್ಯದ ಒಂದು ಮುಖ್ಯ ಆಡಳಿತ ಪ್ರದೇಶವಾಗಿಯೂ ಮೌರ್ಯ ಹಾಗೂ ಗುಪ್ತರ ಕಾಲದವರೆಗೂ ಮುಖ್ಯ ಪ್ರದೇಶವಾಗಿತ್ತೆಂದು ತಿಳಿದುಬರುತ್ತದೆ. ಹಿಂದು ದೊರೆ ಕನೂಜಿನ ಜಯಚಂದ್ರ ಇದನ್ನು ಈಗ ಅವಧ್ (ಔಧ್) ಎಂದು ಕರೆಯುವ ಪ್ರದೇಶವನ್ನು ಆಳುತ್ತಿದ್ದ. ಅನಂತರ ಬಾರ್ ಮತ್ತು ಪಾನ್ಸಿ ಎಂಬ ಸಮುದಾಯದವರು ಇದನ್ನು ವಶಪಡಿಸಿಕೊಂಡರು. ಇವರು 1030ರಲ್ಲಿ ಸಯ್ಯದ್ ಸಲಾರ್ ಮಸ್ಸೂರ್ ಘಾಜಿಯನ್ನೂ 1202ರಲ್ಲಿ ಭಕ್ತಿಯಾರ್ ಖಿಲ್ಜಿಯನ್ನೂ ಎದುರಿಸಿದರು. ಮೊಗಲ್ ದೊರೆ ಅಕ್ಬರ್ ತನ್ನ ಆಡಳಿತಾವಧಿಯಲ್ಲಿ ಸಾಮ್ರಾಜ್ಯವನ್ನು 12 ಭಾಗಗಳಾಗಿ ವಿಂಗಡಿಸಿ, ‘ಅವಧ್’ ಅನ್ನು ಮುಖ್ಯ ಆಡಳಿತ ಪ್ರದೇಶವನ್ನಾಗಿ ಮಾಡಿದ. ಶೇಖ್ ಅಬ್ದುಲ್ ರಹೀಮ್ ಇದನ್ನು ಜಹಗೀರಾಗಿ ಪಡೆದು ಇಲ್ಲಿ ಪಂಚಮಹಲ್ ಅರಮನೆ ನಿರ್ಮಿಸಿದ. ಇವನ ಸಮಾಧಿ ಇಂದಿನ ನಾದನ್‍ಮಹಲ್ ಎಂಬಲ್ಲಿದೆ. ಅನಂತರ 1720-56ರವರೆಗೆ ನವಾಬರ ಆಳಿಕೆಗೊಳಪಟ್ಟು, 11 ಜನ ನವಾಬರು ಆಡಳಿತ ನಡೆಸಿದರು. ಇವರ ಅವಧಿಯಲ್ಲಿ ಇದು ರಾಜಕೀಯವಾಗಿ, ಸಾಂಸ್ಕøತಿವಾಗಿ ದೆಹಲಿಯನ್ನು ಮೀರಿಸುವಷ್ಟು ಮುಂದುವರಿದಿತ್ತು. ಈ ಕಾಲದಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸಿ ಸಾಂಸ್ಕøತಿಕ ನವೋದಯವಾಯಿತು. ಇದು ಲಖನೌ ಸಂಸ್ಕøತಿ ಎಂದು ಪ್ರಸಿದ್ಧವಾಯಿತು. ಸಂಗೀತ (ಹಿಂದೂಸ್ತಾನಿ), ನೃತ್ಯ (ಕಥಕ್, ತಂಬೂರಿ, ಖ್ಯಾಲ್, ದಾದ್ರ, ಖವ್ವಾಲಿ, ಘಜಲ್), ನೌಬತ್, ಶಹನಾಯಿವಾದನ ಮುಂತಾದುವು ಚಾಲ್ತಿಗೆ ಬಂದವು. ವಸ್ತ್ರಾಭರಣಗಳಲ್ಲಿ ಹೊಸ ಹೊಸ ಶೈಲಿಗಳು ಬೆಳಕಿಗೆ ಬಂದವು. ಇಂದಿಗೂ ಇವು ತಮ್ಮ ವೈಶಿಷ್ಟ್ಯವನ್ನುಳಿಸಿಕೊಂಡಿವೆ. ಆನೆ ಕಾಳಗ, ಗಾಳಿಪಟ ಸ್ಫರ್ಧೆಗಳು ಜನಪ್ರಿಯವಾಗಿದ್ದವು. ಇದು ವಿಶಿಷ್ಟ ಬಗೆಯ ಭಕ್ಷ್ಯಭೋಜನ ಹಾಗೂ ಜರ್ದಾ ಬೀಡಾಗಳಿಗೂ (ತಾಂಬೂಲ) ಹೆಸರಾಗಿದೆ. ಇಲ್ಲಿನ ಪಾಕಶಾಸ್ತ್ರ ಪ್ರವೀಣರಿಗೆ ದೇಶ ವಿದೇಶಗಳಲ್ಲಿ ಉನ್ನತ ಬೇಡಿಕೆ ಇದೆ (ಸಾಲರ್ ಜಂಗ್ ಅರಮನೆಯ ಪಾಕಶಾಸ್ತ್ರ ಪ್ರವೀಣರಿಗೆ ತಿಂಗಳಿಗೆ 1,200 ಸಂಬಳ ಪಡೆಯುತ್ತಿದ್ದನಂತೆ!). ಇವರ ಆಸ್ಥಾನಗಳಲ್ಲಿ ಅನೇಕ ಕವಿಗಳು, ಬರೆಹಗಾರರು, ಕಲಾವಿದರು ಆಶ್ರಯ ಪಡೆದಿದ್ದರು. ನವಾಬರ ಕಾಲದಲ್ಲಿ ಇದು ಭವ್ಯನಗರವಾಗಿ ರೂಪುಗೊಂಡಿತು. ನವಾಬರ ಆಡಳಿತದ ಬಗ್ಗೆ ಹೆನ್ರಿಲಾರೆನ್ಸ್ ‘ಅವಧಿನ (ಔಧ್) ನವಾಬರು ಇತರ ಚಕ್ರವರ್ತಿಗಳಂತೆ ಮೂರ್ಖರಾಗಿರಲಿಲ್ಲ. ಇವರು ನಾವು ಭಾವಿಸುವುದಕ್ಕಿಂತ ಹೆಚ್ಚು ಉತ್ತಮ ರಾಗಿದ್ದರಲ್ಲದೆ ಬ್ರಿಟಿಷ್ ಸರ್ಕಾರಕ್ಕೆ ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತಿದ್ದರು’ ಎಂದಿದ್ದಾನೆ. ಭಾರತದ ಪ್ರಥಮ ಸ್ವಾತಂತ್ರ್ಯ ದಂಗೆ ಈ ಪ್ರದೇಶದಲ್ಲಿಯೇ ನಡೆದಿತ್ತೆಂಬುದು ಗಮನಾರ್ಹ. 

ಚಿನ್ನ, ಬೆಳ್ಳಿ ಆಭರಣಗಳ ತಯಾರಿಕೆ, ಕರಕುಶಲ ಕೈಗಾರಿಕೆ, ಹತ್ತಿ, ನಾರು, ಕಸೂತಿ ಕೈಗಾರಿಕೆ, ಮ್ಯಾಂಗನೀಸ್, ಕಾಗದದ ತಯಾರಿಕೆ, ಮುದ್ರಣ, ಲೋಹಗಳ ತಯಾರಿಕೆಗಳಿಗೆ ಇದು ಪ್ರಸಿದ್ಧವಾಗಿದೆ. ಇಲ್ಲಿ ಪುರಾತನವಾದ ಅಸ್ತಲ್ ಗೋಮ್ತಿದಾಸ್. ಬಂದಿದೇವಿಮಂದಿರ, ಶಿವ ಮಹಾವೀರ್‍ಜಿ ಮಂದಿರ ಹಾಗೂ ನವಾಬರ ಕಾಲದ ಪಂಚಮಹಲ್, ಅಕ್ಬರಿ ದರ್ವಾಜಾ ಬುನಿಯಾದ್ ಮಂಜಿಲ್, ಜಲಾಲಾಬಾದ್‍ಕೋಟೆ, ಮಚ್ಚಿಭುವನ್‍ಕೋಟೆ, ಧೂಲರ್‍ಖಾನಾ, ಛತ್ತರ್ ಮಂಜಿಲ್, ಮೋತಿಮಹಲ್, ಕಬ್ಬಿಣದ ಸೇತುವೆ, ಮಕ್ಬರ, ಸಾದರ್ ಅಲಿಖಾನ್, ತೆಹ್ರಿಕೋಠಿ ಮುಂತಾದವು ಪ್ರಸಿದ್ಧವಾಗಿವೆ. ಪುರಾಣ ಪ್ರಸಿದ್ಧ ಯಾತ್ರಾಸ್ಥಳಗಳೂ ಸುಂದರ ಪ್ರವಾಸಿ ಸ್ಥಳಗಳೂ ಇವೆ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ